ಗಂಧದ ಮರ

ಸುವಾಸನೆಯುಳ್ಳ ಹಾಗೂ ಔಷಧೀಯ ಮಹತ್ತ್ವವುಳ್ಳ ಎಣ್ಣೆಯನ್ನು ಕೊಡುವ ಒಂದು ಸುಪ್ರಸಿದ್ಧ ವೃಕ್ಷ. ಶ್ರೀಗಂಧದ ಮರ ಮತ್ತು ಚಂದನದ ಮರ ಇದರ ಪರ್ಯಾಯನಾಮಗಳು. ಸ್ಯಾಂಟಲೇಸೀ ಕುಟುಂಬಕ್ಕೆ ಸೇರಿದೆ. ಸ್ಯಾಂಟಲಂ ಆಲ್ಬಂ ಇದರ ವೈಜ್ಞಾನಿಕ ಹೆಸರು. ಭಾರತದ ಮೂಲವಾಸಿಯಾದ ಇದು ಹೆಚ್ಚು ಕಡಿಮೆ ದಕ್ಷಿಣಭಾರತಕ್ಕೆ ಮಾತ್ರ ಸೀಮಿತವಾಗಿದೆ. ಸುಮಾರು 125,000 ಚದರ ಕಿಲೊ ಮೀಟರ್ ಪ್ರದೇಶದಲ್ಲಿ ಬೆಳೆಯುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಬಹುಪಾಲು ಬೆಳೆಯಿರುವುದು (ದಕ್ಷಿಣ ಭಾರತದಲ್ಲಿನ ಒಟ್ಟು ವ್ಯಾಪ್ತಿಯಲ್ಲೆ ಸೇ. 85ರಷ್ಟು) ಮೈಸೂರು ರಾಜ್ಯದಲ್ಲಿ . ಸಮುದ್ರ ಮಟ್ಟದಿಂದ ಹಿಡಿದು ಸುಮಾರು 1200 ಮೀ. ಎತ್ತರದ ವರೆಗಿನ ಬೆಟ್ಟ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುವ ಗಂಧದಮರ ಮೈಸೂರು ರಾಜ್ಯದ ಕೊಡಗು, ಮೈಸೂರು, ಹಾಸನ ಚಿಕ್ಕಮಗಳೂರು, ಶಿವಮೊಗ್ಗ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೇರಳವಾಗಿಯೂ ಬೆಂಗಳೂರು, ಕೋಲಾರ, ತುಮಕೂರು ಜಿಲ್ಲೆಗಳ ಕುರುಚಲು ಕಾಡುಗಳಲ್ಲಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರಿನ ಸಮೀಪದಲ್ಲಿ ಕೊಂಚಪ್ರಮಾಣದಲ್ಲೂ ಬೆಳೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲೂ ಇದನ್ನು ಕಾಣಬಹುದು. ತಮಿಳುನಾಡಿನ ಕೊಯಮತ್ತೂರು. ಸೇಲಂ ಮತ್ತು ನೀಲಗಿರಿ ಜಿಲ್ಲೆಗಳಲ್ಲೂ ಮಹಾರಾಷ್ಟ್ರ, ಆಂಧ್ರ ಮತ್ತು ಕೇರಳಗಳ ಕೆಲವು ಭಾಗಗಳಲ್ಲೂ ಇದರ ವ್ಯಾಪ್ತಿಯಿದೆ.

	ಅತ್ಯಂತ ಸುಗಂಧಪೂರಿತ ಮರವನ್ನು ಮತ್ತು ಅತಿಮುಖ್ಯವಾದ ಸಾರತೈಲವನ್ನು (ಗಂಧದೆಣ್ಣೆ) ಕೊಡುವುದರಿಂದ ಗಂಧದ ಮರ ಬಹುಬೆಲೆಬಾಳುವ ವೃಕ್ಷವಾಗಿದ್ದು ಮೈಸೂರಿನ ರಾಜವೃಕ್ಷ ಎನಿಸಿದೆ. ಮೈಸೂರು ರಾಜ್ಯದಲ್ಲ ಎಲ್ಲಿ ಬೆಳೆದರೂ ಇದು ಸರ್ಕಾರದ ಸ್ವತ್ತೇ ಆಗಿದೆ ಮತ್ತು ಸರ್ಕಾರದ ಅನುಮತಿಯಿಲ್ಲದೆ ಇದನ್ನು ಕತ್ತರಿಸುವುದನ್ನು, ಸಾಗಿಸುವುದನ್ನು, ಕೆತ್ತನೆ ಕೆಲಸಗಳಿಗೆ ಉಪಯೋಗಿಸುವುದನ್ನು ಮತ್ತು ಇದರಿಂದ ಎಣ್ಣೆಯನ್ನು ಹೊರತೆಗೆಯುವುದನ್ನು ನಿಷೇಧಿಸಲಾಗಿದೆ.

	ಗಂಧದಮರದ ಹತ್ತಿರದ ಸಂಬಂಧಿಗಳಾದ ಮತ್ತು ಅದನ್ನೆ ಹೋಲುವ ಕೆಲವು ಮರಗಳು ಪ್ರಪಂಚದ ಬೇರೆಡೆಯಲ್ಲೂ ಬೆಳೆಯುತ್ತವೆ. ಉದಾಹರಣೆಗೆ ಸ್ಯಾಂಟಲಮ್ ಯಾಸಿ ಎಂಬುದು ಫೀಜಿ ದ್ವೀಪಗಳಲ್ಲೂ ಸ್ಯಾ. ಲ್ಯಾನ್ಸಿಯೋಲೇಟಂ, ಆಬ್ಟು ಸಿಫೋಲಿಯಂ, ಡೆನ್ಸಿಫ್ಲೋರಂ, ಮೆಗಕಾರ್ಪಂ ಎಂಬುವು ಆಸ್ಟ್ರೇಲಿಯದಲ್ಲೂ ಸ್ಯಾ. ಮಾರ್ಗರೆಟೀ ಎಂಬುದು ಪಾಲಿನೇಷಿಯದಲ್ಲೂ ಬೆಳೆಯುತ್ತವೆ.

	ಗಂಧದ ಮರ ಅರ್ಧಪರಾವಲಂಬಿ ಸಸ್ಯ. ತನ್ನ ಸುತ್ತಮುತ್ತ ಬೆಳೆಯುವ ಇತರ ಜಾತಿಯ ಗಿಡಮರಗಳ ಬೇರುಗಳೊಂದಿಗೆ ತನ್ನ ಬೇರುಗಳ ಮೂಲಕ ಸಂಪರ್ಕ ಕಲ್ಪಿಸಿಕೊಂಡು, ವಿಶೇಷ ರೀತಿಯ ಹೀರುಬೇರುಗಳನ್ನು ಆಶ್ರಯದಾತ ಸಸ್ಯಗಳ ಬೇರುಗಳೊಳಕ್ಕೆ ಕಳಿಸಿ ತನ್ನ ಬೆಳವಣಿಗೆಗೆ ಅತ್ಯಗತ್ಯವಾದ ಖನಿಜಾಂಶಗಳನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೊಂಡ ಖನಿಜಗಳನ್ನು ಬಳಸಿಕೊಂಡು ತನ್ನ ಹಸಿರಲೆಗಳ ಸಹಾಯದಿಂದ ತನಗೆ ಬೇಕಾದ ಆಹಾರಪದಾರ್ಥಗಳನ್ನು ದ್ಯುತಿಸಂಶ್ಲೇಷಣೆಯಿಂದ ತಯಾರಿಸುವ ಸಾಮಥ್ರ್ಯ ಮಾತ್ರ ಇದಕ್ಕೆ ಇದೆ ಈ ಬಗೆಯ ಜೀವನಕ್ರಮದಿಂದಾಗಿ ಗಂಧದ ಮರದ ತಾಯಿ ಬೇರು ಹೆಚ್ಚು ಆಳಕ್ಕೆ ಬೆಳೆಯವುದಿಲ್ಲ. ಆದರೆ ಕವಲುಬೇರುಗಳು ಆಶ್ರಯದಾತ ಗಿಡಗಳ ಬೇರುಗಳನ್ನು ಆರಸಿಕೊಂಡು ನೂರಾರು ಅಡಿದೂರದ ವರೆಗೂ ಬೆಳೆಯುತ್ತವೆ. 

	ಮಧ್ಯಮಪ್ರಮಾಣದ ನಿತ್ಯಹರಿದ್ವರ್ಣ ಮರ ಇದು. 30'-40' ಎತ್ತರಕ್ಕೆ ಬೆಳೆಯುತ್ತದೆ. ನೆಲ ಉತ್ತಮವಾಗಿದ್ದರೆ 60' ಎತ್ತರದ ವರೆಗೂ ಬೆಳೆಯಬಹುದು. ಮುಖ್ಯಕಾಂಡದ ಸುತ್ತಳತೆ ಸುಮಾರು 3-3 1/2' ಇರುತ್ತದೆ. ಎಲೆಗಳ ಜೋಡಣೆ ಅಭಿಮುಖ ಮಾದರಿಯದು ; ಆಕಾರ ಅಂಡದಂತೆ. ಅವುಗಳ ಮೇಲ್ಮೈ ಹೊಳೆಯುತ್ತಿರುತ್ತದೆ. ಹೂಗಳು ಮಧ್ಯಾರಂಭಿ ಮಾದರಿಯ ಸಂಕೀರ್ಣ ಹೂ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಬಲು ಚಿಕ್ಕಗಾತ್ರದವು ಇವು. ವಾಸನೆಯಿಲ್ಲ. ಹೂಗಳ ಬಣ್ಣ ಊದಾಮಿಶ್ರಿತ ಕಂದು. ಪ್ರತಿಹೂವಿನಲ್ಲಿ 4 ಪೆರಿಯಾಂತ್ ಹಾಲೆಗಳು, 4 ಕೇಸರಗಳು ಮತ್ತು ನೀಚಸ್ಥಾನದ ಅಂಡಾಶಯ ಇವೆ. ಫಲ ಅಷ್ಟಿಫಲ ಮಾದರಿಯದು, ಗುಂಡಗಿದೆ. ಮಾಗಿದಾಗ ಊದಾಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

	ಕಬ್ಬಿಣದ ಅಂಶ ಹೆಚ್ಚಾಗಿರುವ ಗೋಡುಮಣ್ಣಿನಲ್ಲಿ ಗಂಧದ ಮರ ಚೆನ್ನಾಗಿ ಬೆಳೆಯುತ್ತದೆ. ಲ್ಯಾಟರೈಟ್ ಮಣ್ಣಿನಲ್ಲೂ ಬೆಳೆಯಬಲ್ಲದು. ನೆಲದಲ್ಲಿ ನೀರು ಚೆನ್ನಾಗಿ ಇಂಗಿಹೋಗುವಂತಿರಬೇಕು. ಬಿಸಿಲು ಚೆನ್ನಾಗಿ ಬೀಳುವಂಥ ಬೆಟ್ಟದ ಇಳಿಜಾರುಗಳು ಇದರ ಬೆಳವಣಿಗೆ ಉತ್ತಮ. ವಾರ್ಷಿಕ ಮಳೆ 510-640 ಮಿಮೀ. ಇರಬೇಕು. ಮಳೆ ಕಡಿಮೆ ಇದ್ದಷ್ಟೂ ಉತ್ತಮ. ಶುಷ್ಕವಾತಾವರಣದಲ್ಲಿ ಬೆಳೆದ ಮರದಲ್ಲಿನ ಎಣ್ಣೆಯ ಪರಿಮಾಣ ಬೇರೆಡೆ ಬೆಳೆದ ಮರಗಳಲ್ಲಿನ ಪರಿಮಾಣಕ್ಕಿಂತ ಅತಿ ಹೆಚ್ಚು. ಮಳೆಗಾಲಕ್ಕೆ ಮುಂಚೆ ಬೀಜಗಳನ್ನು ಮಡಿಗಳಲ್ಲಿ ಬಿತ್ತಿ ಸಸಿಗಳು ಹುಟ್ಟಿದ ಮೇಲೆ ಮಾರನೆಯ ವರ್ಷ ನಾಟಿ ಮಾಡಲಾಗುತ್ತದೆ. ಜೊತೆಯಲ್ಲಿ ಆಶ್ರಯದಾತ ಸಸ್ಯಗಳನ್ನು ಬೆಳೆಸಲಾಗುತ್ತದೆ. ಮರದ ಬೆಳವಣಿಗೆ ಮೊದಲ ಹಂತಗಳಲ್ಲಿ ಚೆನ್ನಾಗಿ ನೆರಳು ಬೇಕು. ಗಿಡಗಳು ಎಳೆಯವಿದ್ದಾಗ ದನಕರುಗಳಿಗೆ, ಮೇಕೆ, ಜಿಂಕೆಗಳಿಗೆ ಗಂಧದ ಎಲೆಗಳು ಅಚ್ಚುಮೆಚ್ಚಿನ ಆಹಾರ. ಎಳೆಯ ಸಸಿಗಳನ್ನು ಇಲಿ, ಮೊಲ, ಇತ್ಯಾದಿಗಳು ನಾಶಮಾಡುವುದುಂಟು. ಕಾಳ್ಗಿಚ್ಚಿಗೆ ಗಂಧದ ಮರ ಸುಲಭವಾಗಿ ಈಡಾಗುತ್ತದೆ. ಇವೆಲ್ಲ ಕಾರಣಗಳಿಂದಾಗಿ ಗಿಡಗಳು ಚಿಕ್ಕವಿದ್ದಾಗ ಹೆಚ್ಚು ಆರೈಕೆ ಮಾಡಬೇಕು. 

	ಗಂಧದ ಮರಕ್ಕೆ ಹಲವಾರು ರೋಗಗಳು ಬರುತ್ತವೆ. ಇವುಗಳೆಲ್ಲೆಲ್ಲ ಅತಿಮುಖ್ಯವಾದ್ದು ಸ್ಪೈಕ್ ರೋಗ. ರೋಗ ತಗುಲಿ ಉಲ್ಬಣವಾದಾಗ ಎಲೆಗಳು ಸಣ್ಣದಾಗುತ್ತ ಹೋಗಿ ಕೊನೆಕೊನೆಗೆ ಮೊನಚಾಗಿ ಗಡುಸಾಗಿ ಕೊಂಬೆಗಳು ಬಾಗಿಕೊಂಡು ಬಿಡುತ್ತವೆ. ಕ್ರಮೇಣ ಮರಗಳು ಒಣಗಿನಿಲ್ಲುತ್ತವೆ. ಮೊಟ್ಟಮೊದಲಿಗೆ 1899ರಲ್ಲಿ ಮೆಕಾರ್ಥಿ ಎಂಬುವನು ಈ ರೋಗವನ್ನು ಕೊಡಗಿನ ಕಾಡುಗಳಲ್ಲಿನ ಗಂಧದ ಮರಗಳಲ್ಲಿ ವಿವರಿಸಿದ. ಈ ರೋಗಕ್ಕೆ ಕಾರಣವಾದ ಜೀವಿಯೇನೆಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಒಂದು ಅಭಿಪ್ರಾಯದ ಪ್ರಕಾರ ವೈರಸ್ಸುಗಳಿಂದ ಸ್ಪೈಕ್ ರೋಗ ಉಂಟಾಗುತ್ತದೆ. ಹಲವಾರು ವರ್ಷಗಳಿಂದ ಈ ರೋಗದ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಈ ರೋಗದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ವಾರ್ಷಿಕ ನಷ್ಟ ಸುಮಾರು 10 ಲಕ್ಷ ರೂಪಾಯಿಗಳಿಗೂ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ರೋಗ ತಗುಲಿದ ಮರಗಳನ್ನು ತೆಗೆದುಹಾಕುವುದೂ ತೊಗಟೆಯನ್ನು ಹೆರೆದುಹಾಕುವುದೂ ನಿವಾರಣೋಪಾಯಗಳಲ್ಲಿ ಕೆಲವು. ಇತ್ತೀಚಿಗೆ ಆರ್ಸೆನಿಕ್ ಇರುವ ಕೆಲವು ರಾಸಾಯನಿಕಗಳ ಬಳಕೆಯಿಂದ ರೋಗವನ್ನು ತಡೆಗಟ್ಟಬಹುದು ಎಂದು ಖಚಿತಪಡಿಸಲಾಗಿದೆ. ರೋಗನಿರೋಧ ಶಕ್ತಿಯಿರುವ ಮರಗಳನ್ನು ತಳಿಯೆಬ್ಬಿಕೆ ಪ್ರಯೋಗಗಳಿಂದ ಪಡೆಯುವ ಕಾರ್ಯಕ್ರಮವೂ ಈಗ ಆರಂಭವಾಗಿದೆ. ಗಂಧದ ಮರಕ್ಕೆ ಎಲೆಮುರುಟು ರೋಗವೆಂಬ ವೈರಸ್ ರೋಗವೂ ಬರುತ್ತದೆ.

	ಭಾರತದ ಬಹಳ ಪ್ರಾಚೀನಕಾಲದಿಂದಲೂ ಶ್ರೀಗಂಧ ಬಳಕೆಯಲ್ಲಿದೆ. ಮಲಯಪರ್ವತವೆಂದು ಪುರಾಣಗಳಲ್ಲೂ ಕಾವ್ಯಗಳಲ್ಲೂ ಪ್ರಶಂಸನೆಗೆ ಪಕ್ಕಾಗಿರುವ ಭಾಗ ದಕ್ಷಿಣ ಭಾರತದ ಪೂರ್ವಪಶ್ಚಿಮ ಘಟ್ಟಗಳೇ ಆಗಿವೆ. ಅಲ್ಲಿ ಗಂಧದ ಮರ ವಿಶೇಷವಾಗಿ ಬೆಳೆಯುತ್ತಿತ್ತೆಂದು ಪ್ರತೀತಿ. ಕವಿಸಮಯವಾಗಿರುವ ಮಲಯ ಮಾರುತಕ್ಕೆ ಸುಗಂಧ ಬಂದಿರುವುದು ಆ ಪ್ರದೇಶದಲ್ಲಿನ ಗಂಧದ ಮರಗಳಿಂದಲೇ. ದಕ್ಷಿಣದ ಗಾಳಿಯ ಮೂರು ವಿಶಿಷ್ಟಗುಣಗಳೆಂದರೆ ಶೈತ್ಯ, ಸೌರಭ ಮತ್ತು ಮಾಂದ್ಯ. ಗಂಧ ಪ್ರಸಿದ್ಧ ಸುಗಂಧ ದ್ರವ್ಯಗಳಲ್ಲೊಂದು. ಚೇಗಿನ ತುಂಡನ್ನು ಸಾಣಿಯ ಕಲ್ಲಿನಮೇಲೆ ತೇದು ನುಣುಪಾದ ಗಂಧ ಸರಿಯನ್ನು ತಯಾರಿಸಿ ಅದಕ್ಕೆ ಕೆಸರಿ, ಪಚ್ಚಕರ್ಪೂರಾದಿಗಳನ್ನು ಬೆರೆಸಿ ದೇವತಾರ್ಚನೆಯಲ್ಲಿ ಬಳಸುವ ವಾಡಿಕೆ ಇದೆ. ದೇವಾರ್ಪಿತವಾದ ಗಂಧವನ್ನು ಭಕ್ತಾದಿಗಳು ಮೈಗೆ ಲೇಪನ ಮಾಡಿಕೊಳ್ಳುತ್ತಾರೆ. ಹಿಂದೆ ಸ್ತ್ರೀಯರು ಅಲಂಕರಣದ ಒಂದು ವಿಧಿಯಾಗಿ ಗಂಧವನ್ನು ಬಳಸುತ್ತಿದ್ದುದರ ಉಲ್ಲೇಖ ಕಾವ್ಯಗಳಲ್ಲೇ ಬರುತ್ತದೆ. ತೇದ ನುಣುಪಾದ ಗಂಧದಿಂದ ಹೆಣ್ಣುಮಕ್ಕಳು ತಮ್ಮ ಗಲ್ಲ, ಮೊಲೆಗಳ ಮೇಲೆ ಚಿತ್ರಗಳನ್ನು ಬರೆದುಕೊಳ್ಳುತ್ತಿದ್ದರಂತೆ. ಗಂಧಲೇಪನ ದೇಹಕ್ಕೆ ಸುವಾಸನೆಯನ್ನು ಕೊಡುತ್ತದೆ. ಅದರ ನಸು ಹಳದಿ ಬಣ್ಣದಿಂದ ಅಂಗಕಾಂತಿ ಹೆಚ್ಚುತ್ತದೆ. ಅದು ತಂಪು. ಉಷ್ಣದ ಧಗೆಯನ್ನದು ತತ್ಕಾಲದಲ್ಲಿ ನಿವಾರಿಸುವುದಲ್ಲದೆ ಉಷ್ಣಮೂಲವಾದ ರೋಗಗಳನ್ನು ಶಮನಮಾಡುತ್ತದೆ. ಅದು ಚರ್ಮರೋಗ ನಿವಾರಕ. ದೇವರ ತೀರ್ಥದಲ್ಲಿ ಗಂಧವನ್ನು ಮಿಶ್ರಮಾಡಿ ಹೊಟ್ಟೆಗೂ ತೆಗೆದುಕೊಳ್ಳವುದುಂಟು. ಇದರಿಂದ ಕ್ರಿಮಿಶುದ್ಧಿಯಾಗುತ್ತದೆ. ಈಚೆಗೆ ಅನೇಕ ಚರ್ಮರೋಗ ಔಷಧಿಗಳಿಗೆ ಶ್ರೀಗಂಧದ ವಾಸನೆ ಕಟ್ಟುತ್ತಿದ್ದಾರೆ. ಟ್ಯಾಲ್ಕಂ ಹುಡಿ, ವ್ಯಾನಿಷಿಂಗ್ ಕ್ರೀಮ್, ಕೋಲ್ಡ್‍ಕ್ರೀಮ್, ಮೈತೊಳೆಯುವ ಸೋಪುಗಳು-ಇವೆಲ್ಲಕ್ಕೂ ಶ್ರೀಗಂಧವನ್ನು ಸೇರಿಸುತ್ತಿದ್ದಾರೆ. ಜಗತ್ ಪ್ರಸಿದ್ಧವಾದ ಮೈಸೂರು ಗಂಧದ ಸಾಬೂನಿಗೆ ಶ್ರೀಗಂಧದ ಒಳ್ಳೆಯ ತೈಲವನ್ನೂ ಗುಲಾಬಿಯ ಸಾರವನ್ನೂ ಸೇರಿಸುತ್ತಾರೆ.

	ಗಂಧದ ಚೇಗು ಕೆತ್ತನೆಗೆ ಬಹು ಯೋಗ್ಯ ಮರವೆನಿಸಿದೆ ಆದರಿಂದ ಚಿಕ್ಕ ದೊಡ್ಡ ವಿಗ್ರಹಗಳೂ ಇತರ ಕಲಾವಸ್ತುಗಳು, ಹಣೆಗೆ, ಲೆಕ್ಕಣಿ, ಕಾಗದ ಕತ್ತರಿಸುವ ಚಾಕು ಮೊದಲಾದ ನಿತ್ಯೋಪಯೋಗಿ ಸಾಮಾನುಗಳೂ ತಯಾರಾಗುತ್ತವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಧದ ಕೆತ್ತನೆಗೆ ಪ್ರಸಿದ್ಧರಾದ ಗುಡಿಗಾರರು ಇಂದಿಗೂ ಈ ಕಲೆಯನ್ನು ಒಂದು ಕಸಬಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಗಂಧದ ಕಲಾಕೃತಿಗಳು ಸ್ವದೇಶದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲೂ ಒಳ್ಳೆಯ ಮಾರುಕಟ್ಟೆ ಪಡೆದಿವೆ. ಗಂಧದ ಮರದ ಯಾವ ಭಾಗವೂ ನಿರುಪಯೋತಿಯಲ್ಲ. ಕೆತ್ತನೆಯ ಕೆಲಸದಲ್ಲಿ ಉಳಿಯುವ ಪುಡಿಯನ್ನು ಧೂಪವಾಗಿ ಉಪಯೋಗಿಸುತ್ತಾರೆ. ಊದುಬತ್ತಿ ಮಾಡಲು ಬಳಸುತ್ತಾರೆ.								(ಎ.ಕೆ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ